ಪಳೆಯುಳಿಕೆಗಳು -
ಹಿಂದೊಮ್ಮೆ ಜೀವಂತವಾಗಿದ್ದ ಪ್ರಾಣಿ ಅಥವಾ ಸಸ್ಯಗಳ ಗಡಸು ಭಾಗಗಳು ಇಲ್ಲವೆ ಅವುಗಳ ಗುರುತುಗಳು ರಾಸಾಯನಿಕ ಅಥವಾ ಇತರ ಮಾರ್ಪಾಡುಗಳಿಗೆ ಒಳಗಾಗಿ ಆಯಾ ಪ್ರಾಣಿ, ಸಸ್ಯ ಇಲ್ಲವೆ ಮಾನವನ ಅವಶೇಷವೆಂದು ಗುರುತಿಸಬಹುದಾದ ವಸ್ತುಗಳು (ಫಾಸಿಲ್ಸ್). ಜೀವ್ಯವಶೇಷಗಳು ಪರ್ಯಾಯನಾಮ. ಫಾಸಿಲ್ ಪದ ಲ್ಯಾಟಿನ ಭಾಷೆಯಿಂದ ಬಂದದ್ದು. ಇದರ ಅರ್ಥ ಅಗೆದು ತೆಗೆದ ವಸ್ತು ಎಂದು. ಪಳೆಯುಳಿಕೆಗಳು ಶಿಲೆಯಲ್ಲಿ ಹುದುಗಿ ದೊರೆಯಬೇಕೆಂದಿಲ್ಲ. ಹಿಮ, ಡಾಮರು ಅಥವಾ ಅರಗಿನಲ್ಲಾದರೂ ಸಿಲುಕಿಕೊಂಡು ಅವಶೇಷವಾಗಿರಬಹುದು. ಪಳೆಯುಳಿಕೆಗಳು ಹಿಂದಣ ಜೀವಿಗಳ ದಾಖಲೆಯನ್ನೊದಗಿಸುತ್ತವೆ. ಈ ದಾಖಲೆ ಬಹಳ ಅಪೂರ್ವವಾದುದು. ಭೂಕಾಲದ ಯಾವುದಾದರೊಂದು ಯುಗವೇ ಆದರೂ ಅಸಂಖ್ಯಾತ ಜೀವರಾಶಿಯಿಂದ ತುಂಬಿ ತುಳುಕುತ್ತಿತ್ತು. ಈ ಜೀವರಾಶಿಯ ಎಲ್ಲೊ ಅಲ್ಪಭಾಗ ಮಾತ್ರ ಪಳೆಯುಳಿಕೆಗಳಾಗಿ ದೊರೆಯಬಹುದು. ಇವು ಜೀವ್ಯವಶೇಷಗಳಾಗಿ ಸಂರಕ್ಷಿತವಾದ ಮೇಲೂ ಭೂಸವೆತ ಮತ್ತು ಕೊರತೆಗಳಿಂದಾಗಿ ಬೇರೊಂದು ಸ್ಥಳಕ್ಕೆ ವರ್ಗಾವಣೆಯಾಗಿರಬಹುದು, ಇಲ್ಲವೆ ಸಂಪೂರ್ಣವಾಗಿ ನಶಿಸಿಹೋಗಿರಬಹುದು. ಜೀವ್ಯವಶೇಷಗಳ ಅಧ್ಯಯನ ಹಾಗೂ ಅವುಗಳ ಉಪಯುಕ್ತತೆಗಳನ್ನು ವಿವರಿಸುವ ಶಾಸ್ತ್ರ ಪ್ರಾಗ್ಜೀವ ಶಾಸ್ತ್ರ (ಪೇಲಿಯಂಟಾಲಜಿ). ಪಳೆಯುಳಿಕೆಗಳನ್ನು ಪ್ರೇತಗಳೆಂದೋ, ಚಿತ್ರಿತ ಶಿಲೆಗಳೆಂದೋ ನಿಸರ್ಗದ ಕ್ರೀಡೆ ಎಂದೋ ಇಲ್ಲವೆ ಅಮಾನುಷ ಸೃಷ್ಟಿ ಎಂದೋ ನೋಡುತ್ತಿದ್ದ ಕಾಲವೂ ಇತ್ತು. ಅದರಲ್ಲೂ ಪ್ರಳಯವಾದದ ಬೆಂಬಲಿಗನಾದ ಕ್ಯೂವಿಯೇ (1769-1832) ಮತ್ತು ಅವನ ಅನುಯಾಯಿಗಳು ಇಂಥ ಕಲ್ಪನೆಯನ್ನಿಟ್ಟುಕೊಂಡಿದ್ದರು. ಆದರೆ ಹಟನ್ನನ ಅನಂತರ ಬಂದವರು ಅದೊಂದು ತಪ್ಪು ಕಲ್ಪನೆಯೆಂದೂ ಪಳೆಯುಳಿಕೆಗಳು ಇಂದು ಮುಂದೆ ಎಂದೆಂದೂ ಆಗುತ್ತಿರುವ ವಿದ್ಯಮಾನವೆಂದು ಏಕಪ್ರಕಾರತಾ ವಾದದಿಂದ ಸ್ಪಷ್ಟಪಡಿಸಿದರು. ಪ್ರಾಣಿ ಅಥವಾ ಸಸ್ಯ ಪಳೆಯುಳಿಕೆಯಾಗಲು ಎರಡು ಅಂಶಗಳು ಬಹುಮುಖ್ಯ. ಮೊದಲನೆಯದಾಗಿ ಅವುಗಳ ದೇಹ ಗಡಸು ಅಥವಾ ಕಠಿಣ ಭಾಗಗಳನ್ನು ಪಡೆದಿರಬೇಕು. ಉದಾಹರಣೆಗೆ ಚಿಪ್ಪು, ಮೂಳೆ ಅಥವಾ ಕೊಂಬಿನಂಥ ವಸ್ತು. ಎರಡನೆಯದಾಗಿ ಪ್ರಾಣಿ ಅಥವಾ ಸಸ್ಯಗಳು ಗತಿಸಿದ ಮೇಲೆ ಅವನ್ನು ಕೊಳೆಯುವುದಕ್ಕಾಗಲಿ ಹುಳುಗಳು ತಿನ್ನುವುದಕ್ಕಾಗಲಿ ಬಿಡದೆ ಇಡೀ ಶರೀರ ಮಡ್ಡಿಯಿಂದ ಆವೃತಗೊಂಡು ಹೂತು ಸಮಾಧಿಯಾಗುವಂಥ ಅವಕಾಶವಿರಬೇಕು. ಇವು ಇಂದಿಗೂ ನಡೆಯುತ್ತಿರುವ ಭೂವ್ಯಾಪಾರದಂತೆಯೇ ಇರಬಹುದಾಗಿದೆ. ಭೂಸವೆತ, ಕೊರೆತ, ಸಂಚಯನಕಾರ್ಯ, ಭೂಕುಸಿತ, ಸಾಂಕ್ರಾಮಿಕ ರೋಗಗಳ ಹಾವಳಿ, ಭೂಕಂಪನ, ಪ್ರವಾಹಗಳು, ಅಗ್ನಿಪರ್ವತ, ನೀರ್ಗಲ್ಲ ನದಿಗಳೇ ಅಲ್ಲದೆ ಭೂರಾಸಾಯನಿಕ ಕಾರ್ಯಗಳು, ಸಿಕತೀಕರಣ, ಇಂಗಾಲೀಕರಣ ಸುಣ್ಣೀಕರಣ, ಖನಿಜಪೂರಕಗಳು, ಜಲಜಶಿಲಾ ಸಮುದಾಯಗಳಾಗುವಿಕೆ ಇವೇ ಮೊದಲಾದ ಭೂವ್ಯಾಪಾರಗಳು ಕೋಟ್ಯಂತರ ವರ್ಷಗಳಿಂದಲೂ ಇಂದಿನತನಕ, ಅದರ ಪರಿಣಾಮ, ವ್ಯಾಪ್ತಿ ಮತ್ತು ತೀಕ್ಷ್ಣತೆಗಳು ಹೆಚ್ಚುಕಡಿಮೆಯಾಗಿದ್ದರೂ, ಸತತವಾಗಿ ನಡೆಯುತ್ತಿರುವ ಭೂವ್ಯಾಪಾರಗಳೇ ಆಗಿವೆ. ಈ ತತ್ತ್ವವನ್ನು ಹಟನ್, ಪ್ಲೇಫೇರ್ ಮುಂತಾದವರು ಪ್ರತಿಪಾದಿಸಿದ್ದಾರೆ. ಭೂವಿಜ್ಞಾನದ ಸರ್ವತೋಮುಖ ಅಭಿವೃದ್ಧಿಯನ್ನೂ ಅದರ ಬುನಾದಿಯನ್ನೂ ಈ ತತ್ತ್ವ ನವೀಕರಿಸಿತು.

ಪ್ರಾಣಿ ಅಥವಾ ಸಸ್ಯ ಪಳೆಯುಳಿಕೆಯಾಗಿ ಮಾರ್ಪಡಲು ಪ್ರಕೃತಿಯಲ್ಲಿ ಹಲವಾರು ವಿಧಾನಗಳಿವೆ. ಎಲ್ಲಕ್ಕಿಂತಲೂ ಅತಿಸರಳ ಹಾಗೂ ಸಾಮಾನ್ಯ ವಿಧಾನವೆಂದರೆ ಸಾಗರ ತಳದಲ್ಲಿಯ ಸಂಚಯನ ರೀತಿ ಹಾಗೂ ಅದರಿಂದಾಗುವ ಅವಶೇಷೀಕರಣ ವಿಧಾನ. ಹಿಂದಿನ ಸಾಗರಗಳು ಇಂದಿನಂತೆ ಸೀಮಿತವಾಗಿರದೆ, ಹೆಚ್ಚು ವಿಶಾಲವಾಗಿದ್ದುವು. ಪ್ರಾಚೀನ ಕಾಲದಲ್ಲಿ ವಾಯುಗುಣ ಹೆಚ್ಚು ವೈಪರೀತ್ಯದಿಂದ ಕೂಡಿರಲಿಲ್ಲ. ಇಂದಿನಷ್ಟು ವೈವಿಧ್ಯಪೂರ್ಣವೂ ಆಗಿರಲಿಲ್ಲ. ಆದರೆ, ಭೂಇತಿಹಾಸದ ಪ್ರಾಚೀನ ಕಾಲದಿಂದ ವರ್ತಮಾನಕ್ಕೆ ಬಂದಂತೆಲ್ಲ ಸಾಗರಗಳು ಹಿಂದೆ ಸರಿದು ಸಿಹಿನೀರಿನ ಇಲ್ಲವೆ ಹಿಮನದಿಯ ಹಾಗೂ ಅಗ್ನಿಪರ್ವತಗಳ ಸವೆತ ಸಂಚಯನ ಕಾರ್ಯಗಳು ವೃದ್ಧಿಯಾಗಿ ಅವುಗಳ ಪ್ರಭಾವವನ್ನು ಅವಶೇಷಗಳಲ್ಲಿ ಗಮನಾರ್ಹವಾಗಿ ಕಾಣಬಹುದಾಗಿದೆ.
ಅವಶೇಷೀಕರಣದಲ್ಲಿ ಹಲವಾರು ವಿಧ : ಪ್ರಾಣಿ ಅಥವಾ ಸಸ್ಯ, ಸಂಪೂರ್ಣವಾಗಿ ಸಂರಕ್ಷಿತವಾಗಿರಬಹುದು, ಸಿಕತೀಕರಣ ಹೊಂದಿರಬಹುದು, ಮುದ್ರಿತ ರೂಪದಲ್ಲಿರಬಹುದು ಇಲ್ಲವೆ ಅಚ್ಚೊತ್ತಿರಬಹುದು, ಪಾದದ ಗುರುತುಗಳು ಮಾತ್ರ ಇರಬಹುದು, ಇಂಗಾಲೀಕರಣವಾಗಿರಬಹುದು. ಸುಣ್ಣೀಕರಣವಾಗಿರಬಹುದು.

ಶಾಶ್ವತವಾಗಿ ಹಿಮದಿಂದ ಕೂಡಿರುವ ಸೈಬೀರಿಯ ಮತ್ತು ಅಲಾಸ್ಕಗಳ ಭೂಮಿಯಲ್ಲಿ ಜೂಲು ಆನೆಗಳು (ಮ್ಯಾಮತ್) ಹುದುಗಿಕೊಂಡಿವೆ. ಈ ಜೂಲು ಆನೆಗಳು ಹಿಂದೊಮ್ಮೆ ಅಂದರೆ 60 ಸಾವಿರ ವರ್ಷಗಳ ಹಿಂದೆ (ಪ್ಲಿಯೊಸೀನ್ ಯುಗದಲ್ಲಿ) ನದಿಯ ದಡದಲ್ಲಿ ಹುಲ್ಲನ್ನು ಹುಡುಕುತ್ತಾ ಮುಂದೆ ಮುಂದೆ ಸಾಗಿ ನದಿ ದಂಡೆಯ ತುದಿಯವರೆಗೂ ನಡೆದಿರಬೇಕು. ಕೊನೆಗೆ ಅವುಗಳ ದೇಹದ ಭಾರದಿಂದ ಹಿಮನದಿಯ ದಡ ಕುಸಿದಿರಬೇಕು. ನದಿಯ ಬುರುಜಿಗೆ ಆಕಸ್ಮಿಕವಾಗಿ ಸಿಲುಕಿಕೊಂಡ ಆನೆ, ತಾನು ತಿನ್ನಲೆಂದು ಕಬಳಿಸಿದ ಹುಲ್ಲಿನ ಉಂಡೆಯನ್ನು ದವಡೆಯಲ್ಲಿ ಇಟ್ಟುಕೊಂಡೇ ಇದ್ದು ಉಸಿರುಗಟ್ಟಿ, ಒದ್ದಾಡಿ, ಕೊನೆಯುಸಿರೆಳೆದಿರಬೇಕು. ಇಂಥ ಜೂಲು ಆನೆಗಳ ರೋಮ, ಮಾಂಸಖಂಡ, ಹೆಪ್ಪುಗಟ್ಟಿದ ರಕ್ತಗಳನ್ನೂ ಅದರ ದುರ್ನಾತವನ್ನೂ ಒಳಗೊಂಡಿರುವ ಪಳೆಯುಳಿಕೆಗಳನ್ನು ಇಂದಿಗೂ ಸೈಬೀರಿಯ, ಅಲಾಸ್ಕ ಹಿಮನದಿ ಪ್ರದೇಶಗಳಲ್ಲಿ ಕಾಣಬಹುದು.
ಸಿಕತೀಕರಣ : ಸಂಚಯನದಲ್ಲಿ ಹೆಚ್ಚು ಸಿಕತವಿದ್ದು ಮತ್ತು ಕಾಲಾವಕಾಶಗಳಿದ್ದಲ್ಲಿ ಪ್ರಾಣಿ ಅಥವಾ ಸಸ್ಯಗಳ ಜೀವಕಣಗಳು ನಶಿಸಿದಂತೆಲ್ಲ ಆ ಸ್ಥಳಕ್ಕೆ ಬದಲು ಸರಿಯಾದ ಆಕಾರ ಮತ್ತು ರಚನೆಗಳನ್ನು ಅನುಸರಿಸಿ ಸಿಕತದ ಕಣಗಳು ಒಂದಾದ ಮೇಲೊಂದರಂತೆ ಆಕ್ರಮಿಸಿ ಪ್ರಾಣಿ ಮತ್ತು ಸಸ್ಯಗಳೇ ಶಿಲೆಯಾಗಿ ವರಿವರ್ತಿತವಾಗುವುವು. ಈ ಪ್ರಕ್ರಿಯೆಗೆ ರಾಸಾಯನಿಕ ಕ್ರಿಯೆಗಳು ಸಹಾಯವೀಯುತ್ತವೆ. ಉದಾಹರಣೆಗೆ ಶಿಲೆಯಾಗಿ ಬದಲಾದ ಮರವೊಂದರ ಸೂಕ್ಷ್ಮತೆಳುಪೊರೆಯನ್ನೂ ಜೀವಂತ ಮರವೊಂದರ ತೆಳುಪೊರೆಯನ್ನೂ ಸೂಕ್ಷ್ಮದರ್ಶಕದಲ್ಲಿ ಒಟ್ಟಿಗೆ ಪರೀಕ್ಷಿಸಿದಾಗ ಜೀವಂತ ಮರದ ಜೀವ ಕಣಗಳಲ್ಲಿಯ ಜೀವರಸವನ್ನು ಬಿಟ್ಟರೆ ಎರಡೂ ಒಂದೇ ಎಂದು ಹೇಳುವಷ್ಟರಮಟ್ಟಿನ ಹೋಲಿಕೆಯನ್ನು ಕಾಣಬಹುದು. ಸಿಕತೀಕರಣ ಹೊಂದಿದ ಮೂಳೆಯ ಪಳೆಯುಳಿಕೆಗೂ ಜೀವಂತ ಪ್ರಾಣಿಯಿಂದ ತೆಗೆದ ಮೂಳೆಯ ತೆಳುಪೊರೆಗೂ ಯಾವ ರಚನಾ ವ್ಯತ್ಯಾಸವೂ ಇರುವುದಿಲ್ಲ. ಸಿಕತೀಕರಣದಲ್ಲಿ ಕೆಲವೊಮ್ಮೆ ಅತಿಸೂಕ್ಷ್ಮ ವಿವರವನ್ನೂ ಕಾಣಬಹುದು. ಉದಾಹರಣೆಗೆ ಭಾರತದಲ್ಲಿ ಜುರಾಸಿಕ್ ಯುಗಕ್ಕೆ ಸೇರಿದ ರಾಜಮಹಲ್ ಅಂತರಟ್ರಾಪ್ ಪದರದ ಚರ್ಟ್ ಶಿಲೆಯಿಂದ ವಿಷ್ಣು ಮಿತ್ರೆಯವರು ಕ್ರೋಮೊಸೋಮ್ ಅವಶೇಷವನ್ನು ಪ್ರಕಟಿಸಿದರು (1969). ಹಾಗೆಯೇ ಬೀರ್‍ಬಲ್ ಸಹಾನಿಯವರು 1957ರಲ್ಲಿ ಚೇಂದ್ವಾರದ ಅಂತರಟ್ರಾಪ್ ಚರ್ಟ್‍ನಿಂದ ಫರ್ನ್‍ಜಾತಿಗೆ ಸೇರಿದ ಅeóÉೂೀಲ ಇಂಟರ್ ಟ್ರೇಪಿಯ ಎಂಬ ಸೂಕ್ಷ್ಮಗಾತ್ರದ ಗಿಡದ ಪಳೆಯುಳಿಕೆಯನ್ನು ವಿವರಿಸಿದರು. ಇದು ಇಂದಿಗೂ ಪ್ರಪಂಚದ ಅತ್ಯಂತ ಶ್ರೇಷ್ಠ ದರ್ಜೆಯ ಪಳೆಯುಳಿಕೆಯೆನಿಸಿದೆ. ಕನ್ನಡರ್ನಾಟಕದ ಗುರುಮಟ್ಕಲ್‍ನ ಟ್ರಾಪ್ ಚರ್ಟ್ ಶಿಲೆಯಿಂದ ಕ್ಯಾರೊಫೈಟ್ ಸಸ್ಯದ (ಸೀಗಡಿ ಸತ್ತೆ) ಗಂಡು ಮತ್ತು ಹೆಣ್ಣು ಜನನೇಂದ್ರಿಯಗಳುಳ್ಳ ಪಳೆಯುಳಿಕೆ ಪತ್ತೆಯಾಗಿದೆ.
ಮುದ್ರಿತ ಇಲ್ಲವೆ ಅಚ್ಚೊತ್ತಿರಬಹುದಾದ ಪಳೆಯುಳಿಕೆಗಳು : ಇವು ಹೇರಳವಾಗಿ ದೊರೆಯುತ್ತವೆ. ಮೀನಿನ ಮೈಫಲಕಗಳು ಶಿಲೆಯ ಮೇಲೆ ಅಚ್ಚೊತ್ತಿರುತ್ತವೆ. ಅಮೆರಿಕದ ಕೊಲರ್ಯಾಡೋ ಜೇಡುಶಿಲೆಯ ಮೇಲೆ ಆಲಿಗೊಸೀನ್ ಕಾಲದ (35 ಕೋಟಿವರ್ಷ ಹಿಂದಿನ) ಚಿಟ್ಟೆಯ ಇಡೀ ಶರೀರ, ರೆಕ್ಕೆ, ಮೀಸೆ ಹಾಗೂ ರೆಕ್ಕೆಯಲ್ಲಿರುವ ನರಬಳ್ಳಿಯೊಂದಿಗೆ ಮುದ್ರಿತವಾಗಿದೆ. ಈ ಚಿಟ್ಟೆ ಪಳೆಯುಳಿಕೆಯ ಹೆಸರು ಪೋಡ್ರಿಯಾಸ್ ಪೆರ್ಸಿಪೋನ್ ಎಂದು. ಕೆಲವು ಉದರಪಾದಿಗಳ, ಬಾಹುಪಾದಿಗಳ ಮತ್ತು ಅಮೊನೈಟ್ ಮುಂತಾದ ಪ್ರಾಣಿಗಳ ಹೊರ ಮತ್ತು ಒಳ ಅಚ್ಚುಗಳೂ ದೊರೆತಿವೆ.

ಪಾದದ ಗುರುತುಗಳು : ದೈತ್ಯೋರಗಗಳು ಜುರಾಸಿಕ್ ಮತ್ತು ಕ್ರಿಟೀಷಸ್ ಕಾಲದಲ್ಲಿ ಹೇರಳವಾಗಿದ್ದವು. ಇವು ಹಸಿಮಣ್ಣಿನ ಜಲಾನಯನ ಪ್ರದೇಶಗಳಲ್ಲೊ ಹಸಿ ಜೇಡು, ಶಿಲೆ ಹಾಗೂ ಮರಳು ಪದರಗಳ ಮೇಲೊ ಓಡಾಡಿದಾಗ ಇವುಗಳ ದೇಹದ ಪೂರ್ಣ ಭಾರ (ಅಂದರೆ 60-100 ಟನ್‍ಗಳಷ್ಟು) ಪಾದಗಳ ಮೇಲೆ ಬಿದ್ದು ತತ್ಫಲವಾಗಿ ಉಂಟಾದ ಗುರುತುಗಳು ದೈತ್ಯಾಕಾರದ ಬೋಗುಣಿಗಳಂತೆ ಈಗಲೂ ಪೆರ್ಬಿಕ್ ಸುಣ್ಣಶಿಲೆ (ಇಂಗ್ಲೆಂಡ್)ಗಳಲ್ಲೂ ಸಸೆಕ್ಸ್, ಮಾಂಟಾನಾ ಹಾಗೂ ಟೆಕ್ಸಾಸ್‍ಗಳಲ್ಲೂ ದೊರೆತಿವೆ.

ಇಂಗಾಲೀಕರಣ : ಕೆಲವು ಪ್ರಾಣಿಗಳು ಹಾಗೂ ಬಹುಪಾಲು ಸಸ್ಯಗಳು ಇಂಗಾಲೀಕರಣಕ್ಕೆ ಒಳಗಾಗಿ ತಮ್ಮ ರಚನೆಯನ್ನು ಹಾಗೂ ರೂಪವನ್ನು ಪಳೆಯುಳಿಕೆಗಳಲ್ಲಿ ಉಳಿಸಿಕೊಂಡಿವೆ. ಉದಾಹರಣೆಗೆ ಗೊಂಡ್ವಾನ ಶಿಲೆಗಳ (300 ಕೋಟಿ ವರ್ಷ) ಕಲ್ಲಿದ್ದಲಿನಲ್ಲಿ ದೊರೆಯುವ ಪುಷ್ಟಪರಾಗ ಮತ್ತು ಮರಗಳ ದಿಮ್ಮಿಗಳು ಹಾಗೂ ಅರೆಬೆಂದ ಪೀಟ್ ಇದ್ದಿಲುಗಳು ಈ ವರ್ಗಕ್ಕೆ ಸೇರಿದ ಪಳೆಯುಳಿಕೆಗಳು.

ಸುಣ್ಣೀಕರಣ : ಕೆಲವು ಪ್ರಾಣಿಗಳು ಮತ್ತು ಸಸ್ಯಗಳು ನೀರಿನಲ್ಲಿರುವ ಸುಣ್ಣಾಂಶವನ್ನು ಹೀರಿಕೊಂಡು ಹೊರಕಂಕಾಲವನ್ನು ಕಟ್ಟಿಕೊಳ್ಳುತ್ತವೆ. ಸಮುದ್ರವಾಸಿ ಸಿಂಪಿಗಳು, ಹವಳಗಳು, ಶೈವಾಲಗಳು ಯಥೇಚ್ಛವಾಗಿ ದೊರೆಯುವ ಸುಣ್ಣಾಂಶವನ್ನು ತಮ್ಮ ದೇಹದಲ್ಲಿ ಅಳವಡಿಸಿಕೊಂಡು, ಗತಿಸಿದ ಮೇಲೆ ಸುಣ್ಣ ಶಿಲೆಗಳಾಗುತ್ತವೆ. ಇಂಥ ಶಿಲಾಸ್ತೋಮಗಳನ್ನು ಅರಿಯೂಲೂರಿನ ತಿರುಚಿನಾಪಳ್ಳಿ ಶಿಲಾಸ್ತೋಮದಲ್ಲಿ ಕಾಣುತ್ತೇವೆ. ಇದೇ ಕಾಲದ (ಕ್ರಿಟೇಷಸ್) ಕಲ್ಲಗುಡಿ ಸುಣ್ಣಶಿಲೆ ಸಿಮೆಂಟ್ ಕಾರ್ಖಾನೆಗೆ ಅವಶ್ಯವಾಗಿ ತಯಾರಿಕೆಗೆ ಬೇಕಾಗಿರುವ ಮೂಲವಸ್ತು ಎನಿಸಿದೆ. ಈ ಶಿಲೆ ಹವಳ ಮತ್ತು ಕೆಂಪು ಶೈವಾಲಗಳಿಂದಲೇ ಆದದ್ದು.
ಪಳೆಯುಳಿಕೆಗಳು ಮೇಲೆ ವಿವರಿಸಿದ ಹಲವಾರು ಸಂರಕ್ಷಣಾವಿಧಾನಗಳಿಂದ ಅಲ್ಲದೆ ಅರಗು ಮತ್ತು ರಾಳಗಳಲ್ಲೂ ಪೂರ್ಣ ಸಂರಕ್ಷಿತವಾಗಿರಬಹುದು. ಉದಾಹರಣೆಗೆ ಬಾಲ್ಟಿಕ್ ಪ್ರದೇಶದಲ್ಲಿ ದೊರೆಯುವ ಅರಗಿನಲ್ಲಿ ಅಣಬೆ (ಆಗ್ಯಾರಿಕಸ್ ಮೆಲನೋಟಸ್) ಹಾಗೂ ಸೊಳ್ಳೆಗಳು (ಇಗನೋಟಿಯಮ್ ಮೈನ್ಯೂಟಮ್) ಸಂರಕ್ಷಿತವಾಗಿ ಉಳಿದಿವೆ. ಇವು ಆಲಿಗೋಸಿನ್ ಯುಗದವು ಎಂದು ನಿರ್ಧರಿಸಲಾಗಿದೆ.

ಪಳೆಯುಳಿಕೆಗಳನ್ನು ವರ್ಗೀಕರಿಸಿ ವಿವರಿಸುವಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳಲ್ಲಿ ಬಳಸುವ ದ್ವಿನಾಮಕ ಪದ್ಧತಿಯನ್ನೇ ಬಳಸಲಾಗುತ್ತದೆ. ಪಳೆಯುಳಿಕೆಗಳನ್ನು ಅನ್ವರ್ಥವಾಗಿ ವರ್ಗೀಕರಿಸಿದೆ. ಇವುಗಳಲ್ಲಿ ಮುಖ್ಯವಾದವು ಸೂಚಿ ಪಳೆಯುಳಿಕೆ, ವಲಯ ಪಳೆಯುಳಿಕೆ, ಸಂಶ್ಲೇಷಕ ಪಳೆಯುಳಿಕೆ, ಕತವಂಶಿ ಪಳೆಯುಳಿಕೆ, ಜೀವಂತ ಪಳೆಯುಳಿಕೆ, ಅಜ್ಞಾರ ಪಳೆಯುಳಿಕೆ, ದೊಡ್ಡ ಪಳೆಯುಳಿಕೆ, ಸೂಕ್ಷ್ಮ ಪಳೆಯುಳಿಕೆ, ಮಿಥ್ಯಾಪಳೆಯುಳಿಕೆ, ಚಿರಸ್ಥಾಯಿ ಪಳೆಯುಳಿಕೆ ಇತ್ಯಾದಿ. 
ಪ್ರಪಂಚದ ಪಳೆಯುಳಿಕೆಗಳನ್ನೆಲ್ಲ ಗುರುತಿಸಿ, ಭೂವಿಜ್ಞಾನಿಗಳು ಭೂ ಇತಿಹಾಸದ ಕೋಷ್ಟಕವನ್ನು ರಚಿಸಿದ್ದಾರೆ. ಇದರ ಮೂಲಭೂತ ತತ್ವವನ್ನು ಬ್ರಿಟಿಷ್ ಭೂವಿಜ್ಞಾನಿ ವಿಲಿಯಮ್ ಸ್ಮಿತ್ (1769-1839) ಪ್ರತಿಪಾದಿಸಿದ. ಆ ತತ್ತ್ವವೇ ಪ್ರಾಣಿವರ್ಗಗಳ ಕ್ರಮಾನುಗತ ಪರಂಪರತೆಯ ನಿಯಮ. ಈ ನಿಯಮದ ಪ್ರಕಾರ, ಯಾವುದಾದರೊಂದು ಜಲಜಶಿಲಾ ಪೇರಿಕೆಯಲ್ಲಿ ಕೆಳಪದರಗಳಲ್ಲಿಯ ಪಳೆಯುಳಿಕೆಗಳು ಎಂದಿಗೂ ಮೇಲ್ಪದರದ ಪಳೆಯುಳಿಕೆಗಳಿಗಿಂತ ಪುರಾತನವಾದವಾಗಲೀ ಹೆಚ್ಚು ವಿಕಸಿತವಾದವಾಗಲೀ ಅಲ್ಲ. ಈ ನಿಯಮವನ್ನಾಧರಿಸಿ ಪ್ರಪಂಚದ ಜಲಜಶಿಲಾ ಪೇರಿಕೆಯಲ್ಲಿಯ ಪಳೆಯುಳಿಕೆಗಳನ್ನು ಗುರುತಿಸಿ ಅವುಗಳ ವಯೋಮಿತಿ ಮತ್ತು ನಿರ್ದಿಷ್ಟ ಕಾಲಗಳನ್ನು ಸೂಚಿಸಲಾಗಿದೆ. ಆದುದರಿಂದ ಪಳೆಯುಳಿಕೆಗಳು ಭೂ ಇತಿಹಾಸ ನಿರ್ಧಾರಕ್ಕೆ ಉಪಯುಕ್ತವಾಗಿವೆ. ಅವುಗಳಲ್ಲೂ ಸೂಚಿ ಪಳೆಯುಳಿಕೆಗಳು, ಕೆಲವೇ ಯುಗದಲ್ಲಿ ಮಾತ್ರವಿದ್ದು ನಿರ್ದಿಷ್ಟ ಕಾಲವನ್ನು ಸೂಚಿಸುತ್ತವೆ. ಉದಾಹರಣೆಗೆ ಗೋನಿಯಟೈಟಿಸ್ (ಅಮೊನೈಟ್) ಕೆಳಗಣ ಕಾರ್ಬಾನಿಫೆರಸ್ ಯುಗಕ್ಕೆ ಸೀಮಿತವಾದುದು. ಸೆರಾಟೈಟಿಸ್, ಟ್ರಿಯಾಸಿಕ್ ಯುಗಕ್ಕೆ, ನಮ್ಮುಲೈಟಿಸ್ ಇಯೋಸೀನ್ ಕಾಲಕ್ಕೆ ಸೀಮಿತವಾಗಿವೆ. ಪಳೆಯುಳಿಕೆಗಳಿಂದ ಕಾಲನಿರ್ಣಯ ಹೇಗೋ ಹಾಗೆಯೇ ಕಲ್ಲೆಣ್ಣೆಯ (ಪೆಟ್ರೋಲಿಯಂ) ಅನ್ವೇಷಣೆಯೂ ಸುಗಮ. ಅಲ್ಲದೆ ಕೆಲವು ಖನಿಜಗಳ ಅನ್ವೇಷಣೆಯನ್ನೂ ಮಾಡಬಹುದು. ವಿಕಾಸ ತತ್ತ್ವಕ್ಕೆ ಪಳೆಯುಳಿಕೆಗಳೇ ಮೂಲ. ಹಿಂದಿನ ವಾಯುಮಂಡಲವನ್ನು ತಿಳಿಯಲು ಸಹ ಇವು ಮುಖ್ಯ. ಗತ ಭೂವಿವರಣೆ, ಗತವಾಯುಗುಣ ಮತ್ತು ಖಂಡಗಳ ಅಲೆತದ ಅಧ್ಯಯನದಲ್ಲಿ ಪಳೆಯುಳಿಕೆಗಳು ಪ್ರಧಾನ ಪಾತ್ರವಹಿಸಿವೆ. ಪಳೆಯುಳಿಕೆಗಳ ಸಂಗ್ರಹಣೆಗೆ ಅವನ್ನು ಸಂಸ್ಕರಿಸಿ ಸಂಗ್ರಹಾಲಯದಲ್ಲಿ ಇಡುವುದಕ್ಕೆ, ತಾಂತ್ರಿಕ ಜ್ಞಾನದ ಅವಶ್ಯಕತೆ ಇದೆ. ಪಾಶ್ಚಾತ್ಯ ದೇಶಗಳ ಪ್ರತಿ ನಗರದಲ್ಲೂ ಪಳೆಯುಳಿಕೆಗಳ ಸಂಗ್ರಹವೂ ಸ್ಥಳೀಯ ಹಾಗೂ ಪ್ರಪಂಚದ ವಿವಿಧ ಭಾಗಗಳಿಂದ ತರಿಸಿಕೊಂಡ ಅವಶೇಷಗಳ ಪಟ್ಟಿಯೂ ಇದ್ದು ಪಳೆಯುಳಿಕೆಗಳನ್ನು ಅವು ಹಿಂದೆ ಬದುಕಿದ್ದಾಗ ಯಾವ ಸ್ಥಿತಿಯಲ್ಲಿದ್ದುವೋ ಅಂತಹದೇ ವಾತಾವರಣವನ್ನು ಕಲ್ಪಿಸಿ ಪ್ರದರ್ಶಿಸುವ ಕ್ರಮವನ್ನು ಕಾಣಬಹುದು. ಇತ್ತೀಚೆಗೆ ಭಾರತದಲ್ಲೂ ಭಾರತೀಯ ಭೂವೈಜ್ಞಾನಿಕ ಸರ್ವೆ (ಜಿಯಲಾಲಜಿಕಲ್ ಸರ್ವೆ ಆಫ್ ಇಂಡಿಯಾ) ಪಳೆಯುಳಿಕೆಗಳ ಬೃಹತ್ ಸಂಗ್ರಹಣೆಯನ್ನು ಕೈಗೊಂಡಿರುವುದಲ್ಲದೆ ಪಳೆಯುಳಿಕೆಗಳು ದೊರೆಯುವ ಆಯಾ ಸ್ಥಳಗಳಲ್ಲಿ ಭೂವೈಜ್ಞಾನಿಕ ಉದ್ಯಾನಗಳನ್ನು ನಿರ್ಮಿಸಿದೆ ಕೂಡ. ಇವುಗಳ ವಿವರಣೆಯನ್ನು ನೀಡಲು ನುರಿತ ತಾಂತ್ರಿಕ ವರ್ಗವೂ ಉಂಟು. ಇಂಥ ರಾಷ್ಟ್ರೀಯ ಶಿಲೋದ್ಯಾನಗಳನ್ನು ಅರಿಯಲೂರು (ತಿರುಚಿನಾಪಳ್ಳಿ, ತಮಿಳುನಾಡು), ತಿರುವೇಕ್ಕೆರೈ (ಪಾಂಡಿಚೆರಿ), ಚಂಡೀಘಡ, ತಿರುಪತಿ ಬೆಟ್ಟ (ಆಂಧ್ರ), ಮರಡಹಳ್ಳಿ (ಚಿತ್ರದುರ್ಗ-ಕರ್ನಾಟಕ) ಮುಂತಾದ ಕಡೆಗಳಲ್ಲಿ ಕಾಣಬಹುದು. ಅರಿಯಲೂರಿನ ಹತ್ತಿರವಿರುವ ಸಾತನೂರು ರಾಷ್ಟ್ರೀಯ ಶಿಲೋದ್ಯಾನದಲ್ಲಿ ಸುಮಾರು 40 ಕೋಟಿ ವರ್ಷಗಳ ಹಿಂದೆ ಜೀವಂತವಾಗಿದ್ದ 16 ಮೀ ಉದ್ದ, 3 ಮೀ ವ್ಯಾಸವುಳ್ಳ ಹೆಮ್ಮರದ ಇಡೀ ಕಾಂಡ ಶಿಲಾರೂಪದ ಪಳೆಯುಳಿಕೆ ಇದೆ. ಪಾಂಡಿಚೆರಿಗೆ ಸಮೀಪದಲ್ಲಿರುವ ತಿರುವೇಕ್ಕೆರೈಯಲ್ಲಿ ಇಂಥ ಶಿಲೆಗಳ ಕಾಡನ್ನೇ ನೋಡಬಹುದು. ಅರಿಯಲೂರಿನ ಸುತ್ತಮುತ್ತಲ ಕುನ್ನಮ್, ಪೆಲಂಸೆ, ಕಾರೈ ಮುಂತಾದ ಹಳ್ಳಿಗಳಲ್ಲಿ ಸಾಗರವಾಸಿ ಸಿಂಪಿಗಳ, ಮೃದ್ವಂಗಿಗಳ, ಅಮೋನೈಟ್‍ಗಳ ಅಸಂಖ್ಯಾತ ಪಳೆಯುಳಿಕೆಗಳನ್ನು ಇಂದಿಗೂ ಶೇಖರಿಸಬಹುದಾಗಿದೆ.  60 ಕೋಟಿ ವರ್ಷಗಳ ಹಿಂದಿನ ಬಂಡಿಗಾಲಿ ಗಾತ್ರದ ಅಮೋನೈಟ್‍ಗಳನ್ನು (ಸಾಲಿಗ್ರಾಮ) ಪೆಲಂಸೆ ಎಂಬಲ್ಲಿ ನೋಡಬಹುದು. ಅರಿಯಲೂರಿಗೆ 16 ಕಿಮೀ ದೂರದಲ್ಲಿರುವ ಕಾರೈಯಲ್ಲಿ ಗೊಂಡ್ವಾನ ಯುಗಕ್ಕೆ ಸೇರಿದ 300 ಕೋಟಿ ವರ್ಷ ಹಿಂದಿನ ಪ್ವಿಲೋಫಿಲ್ಲಮ್ ಸಸ್ಯದ ಪಳೆಯುಳಿಕೆ ಇದೆ. ಚಂಡೀಘಡದ ಹತ್ತಿರವಿರುವ ಪಿಂಜೋರ್‍ನಲ್ಲಿ 70 ಸಾವಿರ ವರ್ಷ ಹಿಂದಿನ ಆಮೆಗಳ ಪಳೆಯುಳಿಕೆ ಹಾಗೂ ಆನೆ, ಜಿರಾಫೆ ಮತ್ತು ಆದಿಮಾನವನ ತಲೆಬುರುಡೆ ಮತ್ತು ಮೂಳೆ ಅವಶೇಷಗಳನ್ನು ನೋಡಬಹುದು. ಹೈದರಾಬಾದಿನ ಸಮೀಪದ ಅದಿಲಾಬಾದಿನಲ್ಲಿರುವ ಬೃಹತ್ ಪೆಡಂಭೂತ ಅಥವಾ ದೈತ್ಯೋರಗದ ಅವಶೇಷವಂತೂ ವಿಸ್ಮಯಕಾರಿಯಾಗಿದೆ. ಸುಮಾರು 20 ಮೀ ಉದ್ದದ ಈ ಉರಗ ಪಳೆಯುಳಿಕೆಯಾಗಿ ಕಲ್ಲಾಗಿ ಮಲಗಿದೆ. ಇದರ ಮೂಳೆಗಳನ್ನು ಎರಡು ಲಾರಿಗಳಲ್ಲಿ ತುಂಬಬಹುದಾಗಿದೆ ಎಂದರೆ ಇದರ ಗಾತ್ರವನ್ನು ಊಹಿಸಬಹುದು.

ಕರ್ನಾಟಕದಲ್ಲೂ ಪಳೆಯುಳಿಕೆಗಳಿಗೇನೂ ಕೊರತೆಯಿಲ್ಲ. ಜಗತ್ತಿನ ಅತಿಪುರಾತನ ಪ್ರಸ್ಥಭೂಮಿಯಲ್ಲಿ ಕರ್ನಾಟಕವೂ ಒಂದು. ಆಶ್ಚರ್ಯವೆಂದರೆ, ಇಂಥ ಅತ್ಯಂತ ಹಳೆಯ ಶಿಲೆಗಳಲ್ಲೂ (3200 ಕೋಟಿ ವರ್ಷವಯಸ್ಸಿನ) ಅವಶೇಷಗಳಿವೆ; ಮೈಸೂರು ಜಿಲ್ಲೆಯ ಸರಗೂರಿನ ಶಿಲೆಗಳಲ್ಲಿ ದೊರೆಯುವ ಜೈವಿಕ ರಚನೆಗಳ ಹಾಗೂ ಶೈವಾಲಗಳ ಆಧಾರದ ಮೇಲೆ ಈ ಶಿಲೆಗಳ ವಯಸ್ಸು 3400 ಕೋಟಿ ವರ್ಷಗಳೆಂದೂ ಇವು ದಕ್ಷಿಣ ಆಫ್ರಿಕದ ಅನ್ವರ್‍ವಾಕ್ ಸಮುದಾಯವನ್ನು ಹೋಲುವುದೆಂದೂ ಗೊತ್ತುಪಡಿಸಲಾಗಿದೆ. ಅಂತೆಯೇ ಬಿಜಾಪುರ ಜಿಲ್ಲೆಯ ಕಲಾದಗಿಯ ಶಿಲಾಸ್ತೋಮದಲ್ಲಿ ಸ್ಟ್ರೋಮ್ಯಾಟೊಲೈಟ್ ಶೈವಾಲಗಳನ್ನು ಪತ್ತೆಹಚ್ಚಲಾಗಿದೆ. ಗುಲ್ಬರ್ಗ ಹಾಗೂ ಯಾದಗಿರಿಗೆ ಸಮೀಪದಲ್ಲಿರುವ ಗುರುಮಟ್ಕಲ್‍ನ ಅಂತರ ಟ್ರಾಪ್ ಶಿಲಾಪದರಗಳಿಂದ ಅತ್ಯಂತ ಉತ್ಕøಷ್ಟವಾದ ಸೂಕ್ಷ್ಮಗಾತ್ರದ ಸಿಕತೀಕರಣ ಹೊಂದಿದ ಸಸ್ಯ ಹಾಗೂ ಪ್ರಾಣಿಗಳ ಪಳೆಯುಳಿಕೆಗಳ ಪತ್ತೆಯಾಗಿದೆ. ಪ್ರಪಂಚದಲ್ಲಿ ಮೊತ್ತಮೊದಲ ಬಾರಿಗೆ ಸೀಗಡಿಸತ್ತೆಯ (ಕ್ಯಾರೋಫೈಟ್) ಸಸ್ಯಗಳ ಗಂಡು ಮತ್ತು ಹೆಣ್ಣು ಜನನೇಂದ್ರಿಯ ಭಾಗಗಳನ್ನೊಳಗೊಂಡ ಕ್ಯಾರ ಗುರುಮಟ್ಕಲಿ ಎಂಬ ಹೊಸಜಾತಿಯನ್ನು ಹಾಗೂ ಇದೇ ಪ್ರಕಾರಕ್ಕೆ ಸೇರಿದ ನೈಟೆಲ ಎಂಬ ಸಸ್ಯಜಾತಿಯ ಅತಿವಿರಳ ಪಳೆಯುಳಿಕೆಗಳನ್ನೂ ಗುರುಮಟ್ಕಲಿನ ಚೆರ್ಟ್‍ಶಿಲೆಗಳಲ್ಲಿ ಗುರುತಿಸಲಾಗಿದೆ. ಮಂಗಳೂರಿನ ಬಂದರು ಪ್ರದೇಶದ ಕೆಲವು ಶಿಲೆಗಳಲ್ಲಿ ಫೊರ್ಯಾಮಿನಿಫೆರ ಮತ್ತು  ಆಸ್ಟ್ರೊಕೋಡಗಳಂಥ ಸೂಕ್ಷ್ಮಾವಶೇಷಗಳು ದೊರೆತಿವೆ.
(ಟಿ.ವಿ.ಎಸ್.ಎಚ್.ಎಂ.ಎಸ್.ಎಸ್.ಆರ್.)
(ಪರಿಷ್ಕರಣೆ: ಟಿ.ಆರ್.ಅನಂತರಾಮು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ